ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Days And Nights in the Heartland Of Rebellion.

Posted by ajadhind on ಏಪ್ರಿಲ್ 20, 2010

translation of article by gautham navlakha published in sanhati

ಅಧ್ಯಾಯ 1

ಗೆರಿಲ್ಲಾ ವಲಯದೊಳಗೆ.

ಮಾವೋವಾದಿಗಳು ಬಸ್ತಾರಿನ ಗೆರಿಲ್ಲಾ ವಲಯದೊಳಗೆ ನಡೆಸುತ್ತಿರುವ ಜನಾತನ ಸರಕಾರಕ್ಕೆ ಕಾಲಿರಿಸಿದಾಗ ಮೊದಲು ಗೋಚರಿಸುವ ಸಂಗತಿ ಅವರ ಸ್ವಾಗತದ ರೀತಿ. ಎಲ್ಲರೂ – ಹಿರಿಯರು, ಕಿರಿಯರು, ಗಂಡಸರು – ಹೆಂಗಸರು, ಹಳ್ಳಿಯವರು ಅಥವಾ ಪಕ್ಷದ ಸದಸ್ಯರು ಕೈಕುಲುಕಿ, ಮುಷ್ಠಿ ಮೇಲೆ ಮಾಡಿ “ಲಾಲ್ ಸಲಾಂ” ಎಂದು ವಂದಿಸುತ್ತಾರೆ. ಎರಡನೆಯ ಸಂಗತಿ – ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ [ ಪಿ.ಎಲ್.ಜಿ.ಏ] ಯ ಪ್ಲಟೂನ್ ಅಥವಾ ಕಂಪನಿಗಳಲ್ಲಿರುವ ಹೆಣ್ಣುಮಕ್ಕಳ ಸಂಖ್ಯೆ. ಬಹಳಷ್ಟು ಪ್ಲಟೂನ್ಗಳನ್ನೂ ಹೆಣ್ಣುಮಕ್ಕಳೇ ನಡೆಸುತ್ತಾರೆ. ನಮಗೆ ರಕ್ಷಣೆ ಕೊಡಲು ಬಂದಿದ್ದ ಪ್ಲಟೂನ್ ನ ಮುಂದಾಳು ಹೆಣ್ಣೇ ಇದ್ದಳು. ಮುಂದಾಳತ್ವ ಹೆಸರಿಗಷ್ಟೇ ಸೀಮಿತವಲ್ಲ. ಕಷ್ಟದ ಕೆಲಸಗಳಲ್ಲೂ ಗಂಡಿಗೆ ಸರಿಸಮಾನವಾಗಿ ದುಡಿಯುತ್ತಾರೆ. ಕಟ್ಟಿಗೆ, ನೀರಿನ ಸಂಗ್ರಹ, ಅಡಿಗೆ ಎಲ್ಲದರಲ್ಲೂ ಸಮಪಾಲು. ಪ್ರತಿಯೊಬ್ಬರೂ ೨೦ – ೨೫ ಕೆ.ಜಿ.ಯಷ್ಟು ತೂಕದ ಸಾಮಾನನ್ನು ಹೊರುತ್ತಾರೆ – ಶಸ್ತ್ರಾಸ್ತ್ರ, ಅಡಿಗೆ ಪಡಿತರ ಮತ್ತು ತಮ್ಮ ದೈನಂದಿನ ಉಪಯೋಗದ ಕಿಟ್. ಇಬ್ಬರಿಗೂ ಹೊಲಿಗೆಯಲ್ಲಿ ಪರಿಣಿತಿಯಿದೆ. ಕೇವಲ ರಿಪೇರಿ ಕೆಲಸಗಳಿಗೆ ಸೀಮಿತವಾಗದೆ ತಮ್ಮ ಬಟ್ಟೆ, ಪುಸ್ತಕ ಗುಂಡು ಇತ್ಯಾದಿ ವಸ್ತುಗಳನ್ನು ಹೊರುವ ಬ್ಯಾಗುಗಳನ್ನು ಸ್ವತಃ ಅವರೇ ಹೊಲೆದುಕೊಳ್ಳುತ್ತಾರೆ. ಪಟ್ಟಿ ಕಿತ್ತು ಬಂದಿದ್ದ ನನ್ನ ಬೆನ್ನ ಚೀಲವನ್ನು ಪ್ಲಟೂನ್ ನ ಒಬ್ಬ ಯುವಕ ಸರಿಪಡಿಸಿದ – ಅಚ್ಚುಕಟ್ಟಾದ ಕೆಲಸವಾಗಿತ್ತದು. ಸಮವಸ್ತ್ರಗಳು ಗೆರಿಲ್ಲಾ ವಲಯದೊಳಗೆ ಹೊಲೆದುದಾಗಿತ್ತು. ಶೂ ಮತ್ತಿತರ ದಿನಚರಿ ವಸ್ತುಗಳು ಹೊರಗಿನ ಮಾರುಕಟ್ಟೆಯವು. ಮೂರನೇ ಸಂಗತಿ ಅವರ ಸ್ವಚ್ಛತೆ. ಕುಡಿಸಿದ ನೀರನ್ನು ಉಪಯೋಗಿಸುತ್ತಿದ್ದರು. ಶೌಚಕ್ಕೆ ಕ್ಯಾಂಪ್ನಿಂದ ಒಂದಷ್ಟು ದೂರದಲ್ಲಿ ಗುಂಡಿ ತೆಗೆದಿರುತ್ತಿದ್ದರು. ನನ್ನ ಸಹಚರ ಜಾನ್ ಮಿರ್ದಾಲ್ ಅದನ್ನು ನೋಡಿ ಸ್ವಿಡನ್ನಿನ ಮಿಲಿಟರಿ ಶಿಸ್ತನ್ನು ನೆನಪಿಸಿಕೊಂಡ. ನಾಲ್ಕನೆಯದಾಗಿ, ಬಹು ಮುಖ್ಯವಾಗಿ ಹಗಲಿರಲಿ, ರಾತ್ರಿಯಿರಲಿ ಹೆಚ್ಚುಕಡಿಮೆ ಎಲ್ಲಾ ಪಿ.ಎಲ್.ಜಿ.ಏ. ಸದಸ್ಯರು ಪುಸ್ತಕ ಓದುತ್ತಲೋ ಅಥವಾ ಬರೆಯುತ್ತಲೋ ಇರುತ್ತಿದ್ದರು.. ಜನಾತನ ಸರಕಾರದ ಪ್ರತಿ ವಿಭಾಗವೂ ಗೊಂಡಿ/ ಕೊಯಮ್ ಭಾಷೆಯಲ್ಲಿ ಪತ್ರಿಕೆಗಳನ್ನು ಹೊರತರುತ್ತದೆ. ಒಟ್ಟಾರೆ ದಂಡಕಾರಣ್ಯದಲ್ಲಿ [ ಡಿ.ಕೆ] ೨೫ ಪತ್ರಿಕೆಗಳು ನಿಯಮಿತವಾಗಿ ಪ್ರಕಟಗೊಳ್ಳುತ್ತವೆ. ಎಲ್ಲವೂ ವಲಯದೊಳಗೆ ಪ್ರಕಟವಾಗಿ ವಿತರಿಸಲ್ಪಡುತ್ತದೆ. ಖುದ್ದಾಗಿ ನಾನೇ ೨೫-೨೭ ಜನವರಿಯಂದು ಘೋಷಿಸಲಾಗುತ್ತಿದ್ದ ಮೂರೂ ದಿನದ ಬಂದ್ ಗೆ ಕರಪತ್ರಗಳು ಪ್ರಕಟವಾಗುತ್ತಿದ್ದುದನ್ನು ಕಂಡೆ – ಬಂದ್ ಗೆ ಒಂದು ವಾರದ ಮೊದಲು. ವರದಿಗಾರಿಕೆಯಲ್ಲಿ ಜನರಿಗೆ ಯಾವುದೇ ತೊಂದರೆಯಾಗದಿದ್ದರೂ, ವಿಶ್ಲೇಷಣೆ ಮಾಡುವಾಗ ತೊಡಕುಗಳಿವೆ. ಈ ತೊಡಕನ್ನು ಬಗೆಹರಿಸುವ ರೀತಿ? ವಿಶ್ಲೇಷಣೆಯ ತೊಂದರೆಯನ್ನು ಗುಂಪಿನಲ್ಲಿ ಚರ್ಚಿಸುವ ಮೂಲಕ ಬಗೆಹರಿಸಲಾಗುತ್ತೆ. ಒಂದು ಲೇಖನವನ್ನು ಜೋರುದನಿಯಲ್ಲಿ ಓದಿದ ನಂತರ, ಚರ್ಚೆಯಲ್ಲಿ ಭಾಗವಹಿಸಲು ಎಲ್ಲರನ್ನೂ ಪ್ರೋತ್ಸಾಹಿಸಲಾಗುತ್ತೆ. ತಮಗೆ ಅರ್ಥವಾದಷ್ಟನ್ನು ಪ್ರತಿಯೊಬ್ಬರೂ ವಿವರಿಸಿದ ನಂತರ ಅರ್ಥಪೂರ್ಣ ಚರ್ಚೆ ನಡೆಸಿ ಲೇಖನವನ್ನು ಅರ್ಥೈಸಿಕೊ ಳ್ಳಲಾಗುತ್ತೆ. ವಿದ್ಯಾಭ್ಯಾಸಕ್ಕೆ ಪ್ರಾಧಾನ್ಯತೆ, ಪ್ರೋತ್ಸಾಹ ಎರಡೂ ಇದೆ.ಜನಾತನ ಸರಕಾರದಿಂದ ಐದನೇ ತರಗತಿಯವರೆಗೆ ನಾಲ್ಕು ಪುಸ್ತಕಗಳನ್ನು ತಯಾರಿಸಲಾಗಿದೆ [ ಗಣಿತ, ಸಮಾಜಶಾಸ್ತ್ರ, ರಾಜಕೀಯ ಮತ್ತು ಹಿಂದಿ] ಮತ್ತೂ ನಾಲ್ಕು ತಯಾರಿಯಲ್ಲಿದೆ[ಡಿ.ಕೆ ಯ ಇತಿಹಾಸ, ಸಂಸ್ಕೃತಿ, ಬಯಾಲಜಿ ಮತ್ತು ಸಾಮಾನ್ಯ ವಿಜ್ಞಾನ]

ಪಹರೆ ಕಾಯುವುದರಿಂದ ಅಡುಗೆಯವರೆಗೆ ಪ್ರತಿಯೊಬ್ಬರೂ ಸರದಿಯಂತೆ ಕಾರ್ಯನಿರ್ವಹಿಸುತ್ತಾರೆ. ನಾವವರ ಅತಿಥಿಗಲಾದ್ದರಿಂದ ನಮಗೆ ಹೆಚ್ಚು ಶ್ರಮದ ಕೆಲಸವಿರಲಿಲ್ಲ. ಅವರು ಮೊದಲು ಮಾಡುತ್ತಿದ್ದ ಕೆಲಸ ನೀರಿನ ಕುದಿಸುವಿಕೆ. ಬೈಗಿನ ಕೆಲಸಗಳು ಮುಗಿದಾಗ ಪಿ.ಟಿ.ಯ ಸಮಯ. ಎಂಟಕ್ಕೆ ತಿಂಡಿ. ತಿಂಡಿ ‘ಪೋಹಾ’ ಕಿಚ್ರಿ’ ಇತ್ಯಾದಿ. ನಂತರ ಚಹಾ. ಮಧ್ಯಾಹ್ನ ಮತ್ತು ರಾತ್ರಿಯ ಉಟಕ್ಕೆ ಅನ್ನ, ದಾಲ್ ಮತ್ತು ಪಲ್ಯ. ಸರಳ ಆಹಾರವಾದರೂ ಪೌಷ್ಟಿಕ ಆಹಾರವಾಗಿತ್ತು. ವಾರಕ್ಕೊಮ್ಮೆ ಮಾಂಸ. ಕೆಲವು ಸಲ ಒಂದಕ್ಕಿಂತ ಹೆಚ್ಚು ಬಾರಿ ಮೀನು, ಕ್ರಾಂತಿಕಾರಿ ಜನರ ಸಂಘದಿಂದ [revolutionary people’s committe – r.p.c] ಕೊಟ್ಟಿದ್ದು. ಆರ್.ಪಿ.ಸಿ. ಎಂದರೆ ಚುನಾಯಿತಗೊಂಡ ಒಂದು ಸಂಘ – ೩ -೫ ಹಳ್ಳಿಯ ಆಡಳಿತ ಒಂದು ಆರ್. ಪಿ.ಸಿ ಯ ವ್ಯಾಪ್ತಿಗೆ. ೧೪-೧೫ ಆರ್.ಪಿ.ಸಿ ಗಳು ಸೇರಿ ಒಂದು ಏರಿಯಾ ಆರ್.ಪಿ.ಸಿ. ೩-೫ ಏರಿಯಾ ಆರ್.ಪಿ.ಸಿ – ಒಂದು ಡಿವಿಷನ್.ಕೆಲವು ಸಲ ನಾನು ಅಬುಜ್ಮಾನ್ಗೆ ಪಯಣಿಸುವಾಗ ಆದಂತೆ ಕಿಚರಿಯಷ್ಟೇ ಲಭ್ಯ. ಸರಳವಾಗಿದ್ದರೂ ರುಚಿಕರ, ಪೌಷ್ಟಿಕ. ಪ್ರತಿ ಊಟದ ಜೊತೆಗೆ ಹಸಿರು ಮೆಣಸಿನಕಾಯಿ ಇರುತ್ತಿತ್ತು, ವಿಟಮಿನ್ ಸಿ ಅದರಲ್ಲಿ ಹೆಚ್ಚಿರುತ್ತೆ ಎಂದು!! ಹಾಲಿನ ಅಭಾವದಿಂದಾಗಿ ಚಹಾಗೆ ಹಾಲಿನ ಪೌಡರ್ ನ ಬಳಕೆ. ಬಾಳೆಹಣ್ಣು ಮತ್ತು ಪರಂಗಿ ಜನಾತನ ಸರಕಾರವಿರುವ ಪ್ರದೇಶಗಳಲ್ಲಿ ಹೇರಳವಾಗಿ ಸಿಗುತ್ತದೆ….. ಮಲಗಲು ನಿರ್ದಿಷ್ಟ ಸಮಯವನ್ನು ಗೊತ್ತುಪಡಿಸಿಲ್ಲವಾದರು ರಾತ್ರಿ ಹತ್ತರಷ್ಟೊತ್ತಿಗೆ ಎಲ್ಲರೂ ವಿಶ್ರಾಂತಿ ಪಡೆಯಲು ತೆರಳುತ್ತಾರೆ.ಒಂದೇ ಜಾಗದಲ್ಲಿ ಕ್ಯಾಂಪ್ ಇರುವುದಿಲ್ಲ. ಬದಲಾಗುತ್ತಲೇ ಇರುತ್ತದೆ. ಪ್ಲಾಸ್ಟಿಕ್ ಹಾಸನ್ನು ನೆಲದ ಮೇಲೆ ಹಾಸಿ ಮೈಮೇಲೆ ಕಂಬಳಿ ಹೊದ್ದು ಮಲಗುತ್ತಾರೆ. ನಮಗೆ, ಅವರ ಅತಿಥಿಗಳಿಗೆ, ಪ್ಲಾಸ್ಟಿಕ್ ಹಾಸಿನ ಮೇಲೊಂದು ಶಾಲು ಹಾಕಿದ್ದರು; ಮುಂಜಾವಿನ ಮಂಜಿನಿಂದ ನಮ್ಮನ್ನು ರಕ್ಷಿಸಲು ತಲೆಮೇಲೂ ಒಂದು ಪ್ಲಾಸ್ಟಿಕ್ ಹಾಳೆ. ಬೆಳಿಗ್ಗೆ ಏಳುತ್ತಿದ್ದಂತೆ ಚಹಾ ರೆಡಿಯಾಗಿತ್ತು.

ಆಯ್ದ ಚಿತ್ರಗಳನ್ನು ನೋಡುತ್ತಾರೆ. ನಾವಲ್ಲಿದ್ದಾಗ ಎರಡು ಚಿತ್ರಗಳನ್ನು [ ಜನರ ಒತ್ತಾಯದ ಮೇಲೆ ಎಂದು ನನಗೆ ಹೇಳಿದರು] “ರಂಗ್ ದೇ ಬಸಂತಿ ” ಮತ್ತು “ಮಂಗಲ್ ಪಾಂಡೆ” ಯನ್ನು ಪ್ರದರ್ಶಿಸಿದರು. ಇದು ಪಕ್ಷದ ಹಿರಿಯ ವ್ಯಕ್ತಿ ಭೇಟಿ ಕೊಟ್ಟಾಗ, ಅದೂ ಆ ವ್ಯಕ್ತಿಯ ಬಳಿ ಲ್ಯಾಪ್ ಟಾಪ್ ಇದ್ದಾಗ ಮಾತ್ರ. ಲ್ಯಾಪ್ ಟಾಪ್? ಅವರು ಲ್ಯಾಪ್ ಟಾಪ್ ಅನ್ನು ಚಾರ್ಜ್ ಹೇಗೆ ಮಾಡುತ್ತಾರೆ? ಪ್ಲಟೂನ್ ನಲ್ಲಿಲ್ಲದ್ದಿದ್ದರೂ ಪ್ರತಿ ಕಂಪನಿಯಲ್ಲಿ ಸೋಲಾರ್ ಪ್ಯಾನಲ್ ಗಳಿವೆ, ದೀಪ ಬೆಳಗಿಸಲು, ಕಂಪ್ಯೂಟರ್ ಉಪಯೋಗಿಸಲು. ಟಿ. ವಿ ಕಾರ್ಯಕ್ರಮ ಮತ್ತು ಚರ್ಚೆಗಳನ್ನು ಯ್ಯು ಟ್ಯೂಬ್ ನಿಂದ ಡೌನ್ಲೋಡ್ ಮಾಡಿ ವಿತರಿಸಲಾಗುತ್ತೆ. ನಾನು ಭಾಗವಹಿಸಿದ ಬಹುತೇಕ ಚರ್ಚೆಗಳನ್ನು ಅವರಾಗಲೇ ನೋಡಿದ್ದರೆಂದು ತಿಳಿದು ನನಗೆ ಅಚ್ಚರಿಯಾಯಿತು. ಪರದೆಯಲ್ಲೇ ನಾನು ಹೆಚ್ಚು ಆರೋಗ್ಯವಂತನಾಗಿ ಕಾಣಿಸುತ್ತೆನೆಂದು ಕೆಲವರ ಅಭಿಪ್ರಾಯ! ಆದರೆ ಅವರ ಅಚ್ಚುಮೆಚ್ಚಿನವಳು ಅರುಂಧತಿ ರಾಯ್. ಆಕೆ ಇಂಗ್ಲೀಷ್ ಮಾತನಾಡುತ್ತಾಳೆ; ಇವರು ಹೇಗೆ ಅರ್ಥೈಸಿಕೊಳ್ಳುತ್ತಾರೆ? ಹಿರಿಯ ಕಾಮ್ರೇಡ್ ಗಳು ಅನುವಾದಿಸುತ್ತಾರೆ, ಇತರರ ಅನುಕೂಲಕ್ಕೆ. ಆಕೆಯ ಬಗ್ಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳಿದರು. ಹೌದು, ಕಾಡಿನ ಒಳಗೂ ಆಕೆಗೆ ಅಪಾರ ಅಭಿಮಾನಿ ಬಳಗವಿದೆ! ರೇಡಿಯೋ ಕೇಳುತ್ತಾರೆ; ಪಿ.ಎಲ್.ಜಿ.ಏ ಯ ಸದಸ್ಯರಿಗೆ ಸೈನಿಕರ ಮನವಿಯ ಮೇರೆಗೆ ಪ್ರಸಾರವಾಗುವ ಹಿಂದಿ ಹಾಡುಗಳ ಕಾರ್ಯಕ್ರಮ ಕೇಳುವುದು ಪ್ರಿಯಕರ ಸಂಗತಿ. ಆದರೆ ಎಲ್ಲಾ ಸಮಯದ ಮೆಚ್ಚಿನದು ಬಿ.ಬಿ.ಸಿ. ವಾರ್ತೆ; ಎಲ್ಲರೂ ಕೇಳುತ್ತಾರೆ. ಪ್ರತಿ ಬೆಳಿಗ್ಗೆ ಮತ್ತು ಸಂಜೆ. ನಕಾರಾತ್ಮಕ ಸಂಗತಿಗಳಿಗಾಗಿ ಸ್ಥಳೀಯ ರೇಡಿಯೋ ವಾರ್ತೆಯನ್ನು ಕೇಳುತ್ತಾರೆ. ನಕಾರಾತ್ಮಕ ಸಂಗತಿಯೂ ವಾರ್ತೆಯೇ ಎಂಬ ದೃಷ್ಟಿಯಿಂದ.
ಪ್ಲಟೂನ್ ನ ಪ್ರತಿ ಮುರನೆಯವನ ಬಳಿ ರೇಡಿಯೋ ಇತ್ತು. ಪತ್ರಿಕೆಗಳು ಕೆಲವು ದಿನದ ನಂತರ ತಲುಪುತ್ತಿದ್ದವು. ಬಹಳಷ್ಟು ಪುಸ್ತಕಗಳು ಅಂತರ್ಜಾಲದಿಂದ ಡೌನ್ಲೋಡ್ ಮಾಡಿಕೊಂಡವು. ಹೌದು ಕೆಲವು ಸ್ಥಳಗಳಲ್ಲಿ ಅಂತರ್ಜಾಲದ ಸೌಲಭ್ಯವು ಇದೆ. ಸೌರಶಕ್ತಿ ಬಲ್ಬುಗಳು ರಾತ್ರಿಯ ಸಮಯದಲ್ಲಿ ಓದುವವರಿಗೆ ಅನುಕೂಲಕರ ಅಥವಾ ಬೆಂಕಿಯ ಸುತ್ತ ಕುಳಿತು ಹರಟೆ.

ಮದ್ಯಪಾನ ಮತ್ತು ಧೂಮಪಾನ? ಬಸ್ತಾರಿನ ಜನಕ್ಕೆ ತಮ್ಮದೇ ಆದ ಮದ್ಯ ತಯಾರಿಸುವ ವಿಧಾನ ತಿಳಿದಿದೆ. ಸುಲ್ಫಿ ಅತ್ತು ಮಹುಹಾ ಸಾಮಾನ್ಯವಾದವು. ಅಚ್ಚರಿಯ ವಿಷಯವೆಂದರೆ ಸಾರಾಯಿ ಅಂಗಡಿಗಳನ್ನು ತೆರೆಯಲು ಅನುಮತಿ ಕೊಡದ ಪಕ್ಷ ಸಾಂಪ್ರಾದಾಯಿಕ ಮದ್ಯವನ್ನು ತಯಾರಿಸಲು ಅಡ್ಡಿ ಮಾಡಿಲ್ಲ. ಆದರೆ ಪಕ್ಷದ ಸದಸ್ಯರು ಕುಡಿಯುವುದಿಲ್ಲ. ಪಕ್ಷದ ಸದಸ್ಯರು ಧೂಮ ಮತ್ತು ಮದ್ಯಪಾನದಿಂದ ದುರವಿರಬೇಕೆಂದು ಅಪೇಕ್ಷೆ. ಮದ್ಯಪಾನವನ್ನು ಪಕ್ಷದ ಸದಸ್ಯರ ನಡುವೆ ನಿಷೇಧಿಸಲಾಗಿದ್ದರೂ ಧೂಮಪಾನವನ್ನಲ್ಲ ; ಜೊತೆಗೆ ತೆಂಡು ಎಲೆಗಳು ಬಹಳಷ್ಟು ಲಭ್ಯವಿದೆ. ಆದರೂ ಧೂಮಪಾನವನ್ನೂ ವಿರೋಧಿಸುತ್ತಾರೆ. ಜನಾತನ ಸರಕಾರ ಇವುಗಳ ವಿರುಧ್ಧ ಪ್ರಚಾರಾನ್ದೋಲನವನ್ನೂ ಕೈಗೊಳ್ಳುತ್ತದೆ. ನಾನು ಭೇಟಿಯಿತ್ತಾಗ ಹೇಳಿದಂತೆ ಇಬ್ಬರು ಸಾರ್ವಜನಿಕವಾಗಿ ಧೂಮಪಾನವನ್ನು ತ್ಯಜಿಸುವುದಾಗಿ ಘೋಷಿಸಿ ಉಳಿದವರಿಗೂ ತಮ್ಮನ್ನು ಹಿಂಬಾಲಿಸುವಂತೆ ಪ್ರೋತ್ಸಾಹಿಸುತ್ತಾರೆ. ನನಗೆ ಕಂಡ ಆಸಕ್ತಿದಾಯಕ ವಿಚಾರವೆಂದರೆ ಕ್ಯಾಂಪಿನಲ್ಲಿದ್ದ ಒಬ್ಬ ವ್ಯಕ್ತಿಯೂ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿರಲಿಲ್ಲ.

ಮುಂದುವರಿಯುವುದು…click here to read introduction

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

 
%d bloggers like this: