ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Posts Tagged ‘congress’

ಆಂತರಿಕ ಪ್ರಜಾಪ್ರಭುತ್ವ.?

Posted by ajadhind on ಜುಲೈ 28, 2010

source – prajavani

ಸೋನಿಯಾ ಗಾಂಧಿ ಹೆಸರು ಅಥವಾ ಅವರು ವಾಸಿಸುವ ‘10 ಜನಪಥ್’ ರಸ್ತೆಯು ಅಧಿಕಾರ ಕೇಂದ್ರಕ್ಕೆ ಅನ್ವರ್ಥ ಹೆಸರಾಗಿದೆ. ಸೋನಿಯಾ ಅವರ ಸಮ್ಮತಿ ಇಲ್ಲದೆ ಪಕ್ಷ ಮತ್ತು ಸರ್ಕಾರದಲ್ಲಿ ಯಾವುದೇ ಒಂದು ನಿರ್ಧಾರವಾಗಲಿ ಅಥವಾ ನೇಮಕವಾಗಲಿ ನಡೆಯುವುದೇ ಇಲ್ಲ. ಸೋನಿಯಾ ಗಾಂಧಿ ಅವರು ಶೀಘ್ರದಲ್ಲಿಯೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮರು ಆಯ್ಕೆಯಾಗಲಿದ್ದು, ಈ ಹುದ್ದೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಗೌರವಕ್ಕೆ ಪಾತ್ರವಾಗಲಿದ್ದಾರೆ. ದೇಶದ ಅತಿ ಹಳೆಯ ಮತ್ತು ಅತಿದೊಡ್ಡ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದಿರುವುದನ್ನೂ ಇದು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ಪಕ್ಷದ ಸದಸ್ಯರು ಸೋನಿಯಾ ಅವರೇ ಅಧ್ಯಕ್ಷರೆಂದು ಕಣ್ಣುಮುಚ್ಚಿಕೊಂಡು ಆಯ್ಕೆ ಮಾಡುತ್ತಾರೆ. ಇದೊಂದು ಬರೀ ವಂಶಾಡಳಿತಕ್ಕೆ ಸಂಬಂಧಿಸಿದ ಭ್ರಾಂತಿ ಅಲ್ಲ. ಪಕ್ಷ ಮತ್ತು ಸರ್ಕಾರದಲ್ಲಿ ಸೋನಿಯಾ ಹೊಂದಿರುವ ಹಿಡಿತ ಮತ್ತು ಪ್ರಶ್ನಾತೀತ ನಾಯಕಿ ಆಗಿ ಬೆಳೆದಿರುವುದನ್ನೂ ಸಾಬೀತುಪಡಿಸುತ್ತದೆ. ವಾಸ್ತವದಲ್ಲಿ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಳನ್ನು ಭಟ್ಟಂಗಿಗಳೇ ನಿಯಂತ್ರಿಸುತ್ತಿದ್ದಾರೆ. ದೇಶದ ಯಾವುದೇ ಭಾಗದಲ್ಲಿನ ರಾಜ್ಯಗಳ ವಿಧಾನಸಭೆಗಳಿಗೆ ಯಾವಾಗಲಾದರೂ ಚುನಾವಣೆ ನಡೆಯಲಿ, ಮುಖ್ಯಮಂತ್ರಿ ಆಯ್ಕೆ ಅಧಿಕಾರ ಒಬ್ಬ ವ್ಯಕ್ತಿಯಲ್ಲಿ ಇಲ್ಲವೇ ಒಂದೇ ವ್ಯವಸ್ಥೆಯಲ್ಲಿ ಕೇಂದ್ರೀಕೃತವಾಗಿರುತ್ತದೆ. ತಮ್ಮ ಬೆಂಬಲಿಗರಿಗಷ್ಟೇ ಆತ ಅಥವಾ ಆಕೆ ಟಿಕೆಟ್ ಹಂಚುತ್ತಾನೆ/ಳೆ. ಹೀಗಾಗಿ ಚುನಾಯಿತ ಪ್ರತಿನಿಧಿಗಳೂ ಪಕ್ಷದ ವರಿಷ್ಠ ಮಂಡಳಿ ಬಗ್ಗೆ ಭಯಭಕ್ತಿಯಿಂದಲೇ ವರ್ತಿಸುತ್ತಾರೆ. ಪಕ್ಷದ ಕೇಂದ್ರೀಯ ನಿಯಂತ್ರಣ ಮಂಡಳಿಗೆ ಉದ್ದಕ್ಕೂ ವಿಧೇಯರಾಗಿಯೇ ಇರುತ್ತಾರೆ. ಇವರೆಲ್ಲ ರಾಜ್ಯ ವಿಧಾನಸಭೆಯಲ್ಲಿ ತಮ್ಮ ನಾಯಕನನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿರುವುದಿಲ್ಲ. ಈ ಹೊಣೆಗಾರಿಕೆಯನ್ನು ಪಕ್ಷದ ಹೈಕಮಾಂಡ್‌ಗೆ ಒಪ್ಪಿಸುತ್ತಾರೆ. ದೆಹಲಿ, ರಾಜಸ್ತಾನ, ಹರಿಯಾಣ ಮತ್ತು ಮಿಜೋರಾಂಗಳಲ್ಲಿನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರವನ್ನು ಸೋನಿಯಾ ಗಾಂಧಿ ಅವರ ನಿರ್ಧಾರಕ್ಕೆ ಬಿಡಲಾಗಿತ್ತು. ಮಧ್ಯಪ್ರದೇಶ ಮತ್ತು ಛತ್ತೀಸಗಡ್‌ಗಳಲ್ಲಿ ಬಿಜೆಪಿ ಗೆದ್ದು ಬಂದಾಗ, ನಾಯಕನ ಆಯ್ಕೆ ವಿಚಾರವನ್ನು ಎಲ್. ಕೆ. ಅಡ್ವಾಣಿ ವಿವೇಚನೆಗೆ ಬಿಡಲಾಗಿತ್ತು. ಬಿಜೆಪಿಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಮುಖಂಡರನ್ನು ಸಂಪರ್ಕಿಸಿಯೇ ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ದೆಹಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮರಳಿ ಗೆದ್ದಾಗ, ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಸೋನಿಯಾ ಗಾಂಧಿ ಎದುರು ಹೆಚ್ಚಿನ ಆಯ್ಕೆಗಳೇನೂ ಇದ್ದಿರಲಿಲ್ಲ. ಆದರೂ, ಶೀಲಾ ದೀಕ್ಷಿತ್ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಸಾಕಷ್ಟು ದುಗುಡದಿಂದಲೇ ಕಾಲ ಕಳೆಯಬೇಕಾಯಿತು. ಶೀಲಾ ದೀಕ್ಷಿತ್, ಕಾಂಗ್ರೆಸ್‌ಗೆ ಮೂರನೇ ಬಾರಿಗೆ ಗೆಲುವು ತಂದುಕೊಟ್ಟರೆ, ಅವರು ಪ್ರಧಾನಿ ಆಗುವ ಸಾಧ್ಯತೆಗಳು ಇವೆ ಎನ್ನುವ ಗಾಳಿ ಸುದ್ದಿಗಳು ಆ ಸಂದರ್ಭದಲ್ಲಿ ಹರಡಿದ್ದವು. ಇಂತಹ ಆಧಾರರಹಿತ ಸುದ್ದಿಗಳು ಪಕ್ಷದಲ್ಲಿ ತಮ್ಮ ಬಗ್ಗೆ ಅವಿಶ್ವಾಸ ಮೂಡಿಸಲಿವೆ ಎಂದೂ ದೀಕ್ಷಿತ್ ಆತಂಕಗೊಂಡಿದ್ದರು. ‘ಇದೊಂದು ಅಸಂಬದ್ಧ, ಆಧಾರರಹಿತ ಸುಳ್ಳು ಸುದ್ದಿ’ ಎಂದು ಅವರು ಹಲವಾರು ಟೆಲಿವಿಷನ್ ಚಾನೆಲ್‌ಗಳಲ್ಲಿ ಹೇಳಿಕೊಳ್ಳಬೇಕಾಯಿತು. ತಮಗಾಗದವರು ಇಂತಹ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದೂ ಸ್ಪಷ್ಟಪಡಿಸಬೇಕಾಯಿತು. ರಾಜಸ್ತಾನದಲ್ಲಿ ಅಶೋಕ್ ಗೆಹ್ಲೋಟ್, ಪಕ್ಷಕ್ಕೆ ಗೆಲುವು ತಂದುಕೊಟ್ಟಾಗಲೂ ಅವರ ಆಯ್ಕೆ ಸುಗಮವಾಗಿರಲಿಲ್ಲ. ತಾವು ಕೂಡ ಮುಖ್ಯಮಂತ್ರಿ ಹುದ್ದೆಯ ವಾರಸುದಾರರು ಎಂದು ಹೇಳಿಕೊಂಡ ಕೆಲವರಿಗೆ ದೆಹಲಿಯ ಭಟ್ಟಂಗಿಗಳು ಬೆನ್ನು ತಟ್ಟಿ ಬೆಂಬಲ ನೀಡಿದ್ದರು. ಗೆಹ್ಲೋಟ್ ಅವರಿಂದಾಗಿಯೇ ಮತದಾರರು ಕಾಂಗ್ರೆಸ್ ಪಕ್ಷ ಗೆಲ್ಲಿಸಿದ್ದರೂ, ಶಾಸಕಾಂಗ ಪಕ್ಷದ ಮುಖಂಡನ ಆಯ್ಕೆ ಅಧಿಕಾರವನ್ನು ಸೋನಿಯಾ ಗಾಂಧಿ ಅವರಿಗೆ ನೀಡಲಾಗಿತ್ತು. ಗೆಹ್ಲೋಟ್ ಅವರು ಮುಖ್ಯಮಂತ್ರಿ ಗದ್ದುಗೆ ಪಡೆದುಕೊಂಡರೂ, ಜಾಟ್ ಮತ್ತು ಮೀನಾ ಸಮುದಾಯಕ್ಕೆ ಸೇರಿದ ಇಬ್ಬರು ಉಪ ಮುಖ್ಯಮಂತ್ರಿ ಹುದ್ದೆಗಳಿಗೆ ಸಮ್ಮತಿಸಿ, ಸೋನಿಯಾ ಪದತಳದಲ್ಲಿ ಶರಣಾಗಿದ್ದರು. ಹರಿಯಾಣದ ಭೂಪಿಂದರ್ ಹೂಡಾ ಅವರೂ ಮುಖ್ಯಮಂತ್ರಿ ಹುದ್ದೆಗೆ ಎರವಾಗುವುದನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡರು. ದೆಹಲಿಯಲ್ಲಿಯೇ ಬೀಡುಬಿಟ್ಟಿದ್ದ ಅವರು, ಸೋನಿಯಾ ಗಾಂಧಿ ಭೇಟಿಯಾಗಲು ಸಾಕಷ್ಟು ಸಮಯ ಬಾಗಿಲು ಕಾಯಬೇಕಾಯಿತು. ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಮುನ್ನ ಚಂಡೀಗಡ ಮತ್ತು ದೆಹಲಿ ಮಧ್ಯೆ ಸಾಕಷ್ಟು ಬಾರಿ ವಿಮಾನಗಳಲ್ಲಿ ಓಡಾಡಬೇಕಾಯಿತು. ಹಿಂದಿನ ಚುನಾವಣೆಯಲ್ಲಿ ಓಂ ಪ್ರಕಾಶ್ ಚೌತಾಲಾ ಅವರ ಪಕ್ಷದ ಸಹಯೋಗದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಚೌತಾಲಾ, ಈ ಬಾರಿ ಸ್ವಂತ ಬಲ ನೆಚ್ಚಿಕೊಂಡು ಸ್ಪರ್ಧಿಸಿದ್ದರಿಂದ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದ್ದರೂ ಪ್ರಯಾಸಪಟ್ಟು ಅಧಿಕಾರಕ್ಕೆ ಬಂದಿತ್ತು. ರಾಜ್ಯಸಭಾ ಸದಸ್ಯರ ಆಯ್ಕೆಯಲ್ಲಿಯೂ ಕಾಂಗ್ರೆಸ್ ಪಕ್ಷಕ್ಕಿಂತ ಸೋನಿಯಾ ಗಾಂಧಿ ಅವರೇ ಅಧಿಕಾರ ಚಲಾಯಿಸುತ್ತಾರೆ. ರಾಜೀವ್ ಗಾಂಧಿ ಅವರ ಸಲಹೆಗಾರರಾಗಿದ್ದ ಸತೀಶ್ ಶರ್ಮಾ ಪುನರಾಯ್ಕೆ ಬಗ್ಗೆ ಯಾರಿಗೂ ಅನುಮಾನಗಳು ಇದ್ದಿರಲಿಲ್ಲ. ಪೆಟ್ರೋಲ್ ಪಂಪ್ ಹಂಚಿಕೆ ವಿಷಯದಲ್ಲಿ ಸುಪ್ರೀಂಕೋರ್ಟ್, ಶರ್ಮಾ ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಆದರೆ, ಸೋನಿಯಾ ಗಾಂಧಿ ಅವರಿಗೆ ಪ್ರಾಮಾಣಿಕತೆಗಿಂತ ಭಟ್ಟಂಗಿತನವೇ ಮುಖ್ಯವಾಗಿತ್ತು. ಸೋನಿಯಾ ಗಾಂಧಿ ಹೆಸರು ಅಥವಾ ಅವರು ವಾಸಿಸುವ ‘10 ಜನಪಥ್’ ರಸ್ತೆಯು ಅಧಿಕಾರ ಕೇಂದ್ರಕ್ಕೆ ಅನ್ವರ್ಥ ಹೆಸರಾಗಿದೆ. ಸೋನಿಯಾ ಅವರ ಸಮ್ಮತಿ ಇಲ್ಲದೆ ಪಕ್ಷ ಮತ್ತು ಸರ್ಕಾರದಲ್ಲಿ ಯಾವುದೇ ಒಂದು ನಿರ್ಧಾರವಾಗಲಿ ಅಥವಾ ನೇಮಕವಾಗಲಿ ನಡೆಯುವುದೇ ಇಲ್ಲ. ತಮ್ಮ ಮಾತನ್ನು ಶಿರಸಾವಹಿಸಿ ಪಾಲಿಸುವ ನಿಷ್ಠಾವಂತ ವ್ಯಕ್ತಿಯನ್ನು ಸೋನಿಯಾ, ಪ್ರಧಾನಿ ಮನಮೋಹನ್ ಸಿಂಗ್ ಅವರಲ್ಲಿ ಕಂಡುಕೊಂಡಿದ್ದಾರೆ. ಪಕ್ಷದ ಅಧ್ಯಕ್ಷರು ಮತ್ತು ಪ್ರಧಾನಿಗಳು ಪರ್ಯಾಯ ಅಧಿಕಾರ ಹೊಂದಿದ ಹಲವಾರು ನಿದರ್ಶನಗಳು ಕಾಂಗ್ರೆಸ್ ಪಕ್ಷದಲ್ಲಿ ಇವೆ. ಜವಾಹರಲಾಲ್ ನೆಹರೂ ಮಾತ್ರ ಇದಕ್ಕೆ ಅಪವಾದವಾಗಿದ್ದರು. ಅವರು ಪಕ್ಷದ ಅಧ್ಯಕ್ಷರಿಗೆ ಗೌರವ ನೀಡುತ್ತಿದ್ದರಲ್ಲದೆ ಅವರ ಮಾತೇ ಅಂತಿಮ ಎನ್ನುವುದನ್ನೂ ಪಾಲಿಸಿಕೊಂಡು ಬಂದಿದ್ದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿ, ಅದರಲ್ಲೂ ಇಂದಿರಾ ಅವರು, ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಹುದ್ದೆಯನ್ನು ಚಪರಾಸಿ ಮಟ್ಟಕ್ಕೆ ಇಳಿಸಿದ್ದರು. ಇಎಂಎಸ್ ನಂಬೂದಿರಿಪಾಡ್ ನೇತೃತ್ವದ ಕೇರಳದ ಕಮ್ಯುನಿಸ್ಟ್ ಪಕ್ಷದ ಸರ್ಕಾರವನ್ನು ವಜಾ ಮಾಡಬಾರದು ಎನ್ನುವುದು ನೆಹರೂ ಅವರ ಕಾಳಜಿಯಾಗಿತ್ತು. ಆದರೆ, ಆಗಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿದ್ದ ಇಂದಿರಾ ಗಾಂಧಿ ಸರ್ಕಾರ ವಜಾಕ್ಕೆ ಪಟ್ಟು ಹಿಡಿದಿದ್ದರು. ಪಕ್ಷದ ರಾಜಕೀಯ ಹಿತಾಸಕ್ತಿಗಾಗಿ ಸರ್ಕಾರ ವಜಾ ಮಾಡಲು ಬಯಸಿದ್ದರು. ಪಕ್ಷದ ಅಧ್ಯಕ್ಷೆಯಾಗಿ ಕೊನೆಗೂ ಅವರು ತಮ್ಮ ಹಟ ಸಾಧಿಸಿದ್ದರು. ಇಂದಿರಾ, ನೆಹರೂ ಅವರ ಪುತ್ರಿ ಎನ್ನುವುದು ಇಲ್ಲಿ ಮುಖ್ಯವಾಗಿರದೆ, ಕಾಂಗ್ರೆಸ್‌ನ ಅಧ್ಯಕ್ಷೆಯಾಗಿದ್ದರು ಎನ್ನುವುದು ಮುಖ್ಯವಾಗಿತ್ತು. ಪಕ್ಷದ ಅಧ್ಯಕ್ಷರೇ ಪ್ರಧಾನಿಯನ್ನು ನೇಮಕ ಮಾಡುವುದರಿಂದ ಅವರ ಮಾತಿಗೆ ಮಹತ್ವ ಇತ್ತು. ಒಂದು ವೇಳೆ ನೆಹರೂ ಅವರು ತಮ್ಮ ನಿಲುವಿಗೇ ಬಲವಾಗಿ ಅಂಟಿಕೊಂಡಿದ್ದರೆ ಸರ್ಕಾರ ವಜಾ ಆಗುತ್ತಿರಲಿಲ್ಲ. ಆದರೆ, ಅವರು ನಿಯಮಗಳಿಗೆ ಬದ್ಧರಾಗಿದ್ದರಿಂದ ಮತ್ತು ಪಕ್ಷದ ಹಿರಿಮೆ ಗೌರವಿಸುವ ಕಾರಣಕ್ಕೆ ಹಟ ಹಿಡಿಯಲಿಲ್ಲ. ನೆಹರೂ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಶಾಸ್ತ್ರಿ ಅವರು, ಪಕ್ಷದ ಅಧ್ಯಕ್ಷ ಕೆ. ಕಾಮರಾಜ್ ಅವರನ್ನು ದುಸ್ಸಾಹಸಿ ಎಂದೇ ಪರಿಗಣಿಸಿದ್ದರು. ತಾವು ಪ್ರಧಾನಿ ಆಗಲು ಕಾಮರಾಜ್ ನೆರವಾಗಿದ್ದರೂ, ಶಾಸ್ತ್ರಿ ಅವರು ಕಾಮರಾಜ್ ಅವರ ಅಧಿಕಾರ ಮೊಟಕುಗೊಳಿಸಿದ್ದರು. ರಾಷ್ಟ್ರಪತಿಗೆ ಸಲ್ಲಿಸಿದ ತಮ್ಮ ಸಂಪುಟ ಸದಸ್ಯರ ಹೆಸರಿನ ಪಟ್ಟಿಯನ್ನು ಶಾಸ್ತ್ರಿ ಅವರು ಕಾಮರಾಜ್ ಗಮನಕ್ಕೂ ತಂದಿರಲಿಲ್ಲ. ಇಂದಿರಾ ಗಾಂಧಿ ಅವರಂತೆ ಶಾಸ್ತ್ರಿ ಅವರು ಕನಿಕರ ಇಲ್ಲದ ವ್ಯಕ್ತಿಯಾಗಿರಲಿಲ್ಲ. ಆದರೆ, ಕಾಮರಾಜ್ ಅವರ ವರ್ಚಸ್ಸು ಕುಂದಲು ಮಾತ್ರ ಅವಕಾಶ ಮಾಡಿಕೊಟ್ಟಿರಲಿಲ್ಲ. ಕಾಮರಾಜ್ ಬೆಂಬಲದಿಂದ ಅಧಿಕಾರಕ್ಕೆ ಬಂದ ನಂತರವೂ, ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆದ ಇಂದಿರಾ ಗಾಂಧಿ, ಕಾಮರಾಜ್ ಮತ್ತವರ ಸಿಂಡಿಕೇಟ್ ತಮ್ಮ ಹಾದಿಗೆ ಅಡ್ಡಿಯಾಗಲಿದೆ ಎಂದೇ ಭಾವಿಸಿದ್ದರು. ವಿ. ವಿ. ಗಿರಿ ಅವರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡುವ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿ ಸಂಜೀವ ರೆಡ್ಡಿ ಅವರನ್ನು ಸೋಲಿಸಿ ಸಿಂಡಿಕೇಟ್‌ಗೆ ಪಾಠ ಕಲಿಸಿದ್ದರು. ಆನಂತರ ಪಕ್ಷದ ಹುದ್ದೆ ಮತ್ತು ಪ್ರಧಾನಿ ಗದ್ದುಗೆ ಎರಡನ್ನೂ ನಿರ್ವಹಿಸುತ್ತಲೇ ಮುಂದುವರೆದಿದ್ದರು. ತಾಯಿಯ ಆದರ್ಶವನ್ನೇ ಪುತ್ರ ರಾಜೀವ್ ಗಾಂಧಿ ಕೂಡ ಪಾಲಿಸಿಕೊಂಡು ಬಂದಿದ್ದರು. ಈ ಪರಂಪರೆಗೆ ಸೋನಿಯಾ ಗಾಂಧಿ ಅಪವಾದವಾಗಿದ್ದಾರೆ. ಕಾಂಗ್ರೆಸ್ ಮುಖಂಡರೆಲ್ಲ ಅವರನ್ನೇ ತಮ್ಮ ಅಧಿನಾಯಕಿ ಮತ್ತು ಪಕ್ಷವನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯ ಅವರಲ್ಲಿ ಮಾತ್ರ ಇರುವುದನ್ನು ಒಪ್ಪಿಕೊಂಡಿದ್ದಾರೆ. ಇದು ಅವರ ಪರವಾಗಿರುವ ಅನುಕೂಲ. ಪಕ್ಷದವರು ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಸೋನಿಯಾ ನಿಜ ಮಾಡಿಯೂ ತೋರಿಸಿದ್ದಾರೆ. ಪಕ್ಷದ ಅಧ್ಯಕ್ಷೆಯಾಗಿ ಅಧಿಕಾರವಹಿಸಿಕೊಂಡ ನಂತರ ಅವರು ಪಕ್ಷದಲ್ಲಿನ ವಿರೋಧವನ್ನು ಬಗ್ಗುಬಡಿದಿದ್ದಾರೆ. ಈಗ ಅವರ ಗುರಿ ಏನಿದ್ದರೂ, ಪುತ್ರ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಆಗಿ ಮಾಡುವುದು. ಪ್ರಧಾನಿ ಗದ್ದುಗೆಯಲ್ಲಿ ರಾಹುಲ್ ಅವರನ್ನು ಪ್ರತಿಷ್ಠಾಪಿಸುವವರೆಗೆ ಮನಮೋಹನ್ ಸಿಂಗ್ ಅವರನ್ನೇ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಸಲಿದ್ದಾರೆ. ಎರಡನೇ ಬಾರಿಗೆ ಪ್ರಧಾನಿ ಆದ ಕೂಡಲೇ ನಡೆದ ಸುದ್ದಿಗೋಷ್ಠಿಯಲ್ಲಿ ಸ್ವತಃ ಮನಮೋಹನ್ ಸಿಂಗ್ ಅವರೇ, ರಾಹುಲ್ ಗಾಂಧಿ ಅವರಿಗಾಗಿ ಯಾವುದೇ ಸಂದರ್ಭದಲ್ಲಿ ಪದತ್ಯಾಗ ಮಾಡಲು ತಾವು ಸಿದ್ಧ ಎಂದು ಘೋಷಿಸಿದ್ದರು. ಆರೆಸ್ಸೆಸ್ ತನ್ನ ಉದ್ದೇಶ ಏನೆಂಬುದನ್ನು ಸ್ಪಷ್ಟಪಡಿಸಿದ ನಂತರವೇ ಬಿಜೆಪಿಯು ನಿತಿನ್ ಗಡ್ಕರಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಪಕ್ಷದ ನಿಯಂತ್ರಣ (ರಿಮೋಟ್ ಕಂಟ್ರೋಲ್) ವಿಷಯದಲ್ಲಿ ಬಿಜೆಪಿಯು ಕಾಂಗ್ರೆಸ್‌ಗಿಂತ ಭಿನ್ನವಾಗಿದೆ. ನಾಗಪುರದಲ್ಲಿ ಇರುವ ಆರೆಸ್ಸೆಸ್‌ನ ಪ್ರಧಾನ ಕಚೇರಿಯೇ ಬಿಜೆಪಿಯ ವರಿಷ್ಠ ಮಂಡಳಿಯಾಗಿದೆ. ರಾಜ್ಯ ವಿಧಾನಸಭೆ ಮತ್ತು ಸಂಸತ್ತಿನಲ್ಲಿನ ಕಾಂಗ್ರೆಸ್ ಮತ್ತು ಬಿಜೆಪಿಯ ಶಾಸಕರು – ಸಂಸದರು, ಪಕ್ಷದ ಅಧ್ಯಕ್ಷರ ಅಣತಿಯಂತೆ ವರ್ತಿಸುವ ಕೈಗೊಂಬೆಗಳಾಗಿದ್ದಾರೆ. ಚುನಾಯಿತ ಪ್ರತಿನಿಧಿಗಳು ಎಲ್ಲ ಪಕ್ಷಗಳಲ್ಲೂ ಸ್ವಂತಿಕೆ ಕಳೆದುಕೊಂಡಿದ್ದಾರೆ. ಎರಡೂ ಪಕ್ಷಗಳಲ್ಲಿ ವರಿಷ್ಠ ಮಂಡಳಿಯದ್ದೇ ಅಂತಿಮ ಮಾತು. ಶಾಸಕರು ಮತ್ತು ಸಂಸದರನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವು ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ ಮತ್ತು ಬಿಜೆಪಿಯಲ್ಲಿ ಆರೆಸ್ಸೆಸ್ ಬೆಂಬಲಿತ ಅಡ್ವಾಣಿ ಅಥವಾ ಗಡ್ಕರಿ ಅವರ ಬಳಿ ಇರುವಾಗ ಮತದಾರರು ಉತ್ತಮ ಜನಪ್ರತಿನಿಧಿಗಳೇ ಆಯ್ಕೆಯಾಗಬೇಕೆಂದು ಬಯಸುವುದು ಏಕೆ?

Advertisements

Posted in ಪ್ರಸ್ತುತ | Tagged: , , , , | Leave a Comment »